"ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಅಪ್ಪನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ"
"ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಅಪ್ಪನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ"
ಮಂಗಳೂರು: ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಅಪ್ಪನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ
ಮಂಗಳೂರು: ತನ್ನ ಹೆಂಡತಿಯ ಮೇಲಿನ ದ್ವೇಷದಿಂದ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಂದೆಗೆ ಮಂಗಳೂರಿನ ಮೂರನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ.
ತಾಳಿಪಾಡಿ, ಪದ್ಮನೂರು, ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್(43) ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿ.
ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಹಿತೇಶ್, ಕೆಲಸಕ್ಕೆ ಹೋಗುವುದಕ್ಕೂ ಆಸಕ್ತಿ ತೋರುತ್ತಿರಲಿಲ್ಲ. ಇದರಿಂದ ಸಂಸಾರ ಸಾಗಿಸೋದು ಕಷ್ಟವಾಗಿತ್ತು. ಆದ್ದರಿಂದ ಹೇಗಾದರೂ ಮಾಡಿ ಪತ್ನಿ ಹಾಗೂ ಮೂವರು ಮಕ್ಕಳನ್ನು ಕೊಲೆಗೈದರೆ, ತಾನು ಹೇಗೆ ಬೇಕಾದರೂ ಜೀವಿಸಬಹುದು ಎಂದು ಆಲೋಚಿಸಿದ್ದ.
2022ರ ಜೂನ್ 23ರಂದು ಸಂಜೆ 5.15ರಸುಮಾರಿಗೆ ಶಾಲೆಯಿಂದ ಹಿಂದಿರುಗಿ ಬಂದಿದ್ದ ತನ್ನ ಮೂವರು ಮಕ್ಕಳಾದ ರಶ್ಮಿತಾ(14), ಉದಯ ಕುಮಾರ್ (11), ದಕ್ಷಿತ್(4)ರನ್ನು ಹಿತೇಶ್ ಶೆಟ್ಟಿಗಾರ್ ತನ್ನ ಪಕ್ಕದ ಮನೆಯವರ ಬಾವಿಗೆ ದೂಡಿ ಹಾಕಿದ್ದಾನೆ. ಈ ವೇಳೆ ಮಕ್ಕಳು ಬಾವಿಯಲ್ಲಿನ ಹಗ್ಗ ಹಿಡಿದು ಮೇಲಕ್ಕೆ ಬರಲು ಯತ್ನಿಸಿದಾಗ, ಹಿತೇಶ್ ಕತ್ತಿಯಿಂದ ಹಗ್ಗವನ್ನು ಕಡಿದಿದ್ದಾನೆ. ಇದರಿಂದ ಮಕ್ಕಳು ಬಾವಿಯಿಂದ ಮೇಲೆ ಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿತ್ತು.
ಕೆಲಸದಿಂದ ಬಂದ ಹಿತೇಶ್ ಶೆಟ್ಟಿಗಾರ್ ಪತ್ನಿ ಲಕ್ಷ್ಮೀ ಮಕ್ಕಳನ್ನು ಹುಡುಕಾಡುತ್ತಿದ್ದಾಗ, ಆಕೆಯನ್ನು ಅದೇ ಬಾವಿಗೆ ದೂಡಿ ಹಾಕಿ ಕೊಲೆಗೈಯಲು ಯತ್ನಿಸಿದ್ದಾನೆ. ಈ ವೇಳೆ ಆಕೆ ಹಿತೇಶ್‌ನನ್ನು ಗಟ್ಟಿಯಾಗಿ ಹಿಡಿದಿದ್ದರಿಂದ ಆತನೂ ಬಾವಿಗೆ ಬಿದ್ದಿದ್ದಾನೆ. ಪತಿ-ಪತ್ನಿ ಬಾವಿಗೆ ಬಿದ್ದಾಗ ನೆರೆಹೊರೆಯವರಿಗೆ ವಿಚಾರ ತಿಳಿದಿದೆ. ಅಲ್ಲಿದ್ದವರು ಇಬ್ಬರನ್ನೂ ರಕ್ಷಿಸಿ ಮೇಲಕ್ಕೆತ್ತಿದ್ದಾರೆ.
ಬಳಿಕ ಹಿತೇಶ್ ಶೆಟ್ಟಿಗಾರ್ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುಲ್ಕಿ ಠಾಣೆಯ ಅಂದಿನ ನಿರೀಕ್ಷಕ ಕುಸುಮಾಧರ್ ಕೆ.ರವರು ತನಿಖೆ ಪೂರ್ಣಗೊಳಿಸಿ ಆತನ ವಿರುದ್ಧ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿತು. ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 32 ಸಾಕ್ಷಿದಾರರನ್ನು ವಿಚಾರಿಸಲಾಗಿದೆ. ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಅಪರಾಧವು ಸಾಬೀತಾಗಿದೆ ನ್ಯಾಯಾಲಯ ಘೋಷಿಸಿದೆ. ಆದ್ದರಿಂದ ನ್ಯಾಯಾಧೀಶೆ ಸಂಧ್ಯಾ ಎಸ್.ರವರು ಮಕ್ಕಳನ್ನು ಕೊಲೆಗೈದಿರುವ ಅಪರಾಧಕ್ಕೆ ಐಪಿಸಿ ಸೆಕ್ಷನ್ 302ರಡಿ ಗಲ್ಲು ಶಿಕ್ಷೆ ಮತ್ತು ಐಪಿಸಿ ಸೆಕ್ಷನ್ 307ರಡಿ 10 ವರ್ಷಗಳ ಕಾರಾಗೃಹವಾಸದ ಶಿಕ್ಷೆ ವಿಧಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ
Comments
Post a Comment