ಅಕ್ರಮವಾಗಿ ಕಾಡುಗಿಳಿ ಸಾಕಿದ ಆರೋಪ! ವ್ಯಕ್ತಿ ವಿರುದ್ಧ ಪ್ರಕರಣ ದಾಖಲು..!
ಅಕ್ರಮವಾಗಿ ಕಾಡುಗಿಳಿ ಸಾಕಿದ ಆರೋಪ! ವ್ಯಕ್ತಿ ವಿರುದ್ಧ ಪ್ರಕರಣ ದಾಖಲು..!
ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ಕಾಡುಗಿಳಿಗಳನ್ನು ಸಾಕುತ್ತಿದ್ದ ಅಕ್ಟರ್ ಪಾಷಾ ಎಂಬುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಅಕ್ರಮವಾಗಿ ಕಾಡುಗಿಳಿಗಳನ್ನು ಸಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬರು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು, ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯ ನೆಹರುನಗರದ ವಲ್ಲಭ ಗಣಪತಿ ದೇವಸ್ಥಾನದ ಮುಂಭಾಗದ ನಿವಾಸಿ ಅಕ್ಬರ್ ಪಾಷಾ ಎಂಬುವವರು ತಮ್ಮ ಮನೆಯ ಆವರಣದಲ್ಲಿ ಎರಡು ಕಾಡುಗಿಳಿಗಳನ್ನು ಪಂಜರದಲ್ಲಿ ಇರಿಸಿಕೊಂಡು ಅಕ್ರಮವಾಗಿ ಸಾಕುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ರಾಜ್ಯ ಸಿಐಡಿ ಅರಣ್ಯ ಘಟಕದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಎಸ್.ಕೆ ದಿವಾಕರ, ಕೆ.ಎಸ್ ದಿಲೀಪ್, ಹೆಚ್. ದೇವರಾಜ, ವೈ. ಹೇಮಾವತಿ ಹಾಗೂ ಕೆ.ಎಲ್. ತಿಮ್ಮಶೆಟ್ಟಿ ಪಾಲ್ಗೊಂಡಿದ್ದರು. ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಕಾಡುಗಿಳಿಗಳನ್ನು ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಸಂರಕ್ಷಣೆಗಾಗಿ ವಲಯ ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ವನ್ಯಜೀವಿಗಳನ್ನು ಪಂಜರದಲ್ಲಿ ಬಂಧಿಸಿ ಸಾಕುವಂತಿಲ್ಲ ಎಂಬ ಕಾನೂನಿದ್ದರೂ ಅಕ್ರಮವಾಗಿ ಸಾಕುವವರ ವಿರುದ್ಧ ಅಧಿಕಾರಿಗಳು ಈಗ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ರಾಜ್ಯ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಎರಡು ಕಾಡುಗಿಳಿಗಳನ್ನು ಪಂಜರದಿಂದ ವಶಕ್ಕೆ ಪಡೆದಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
Comments
Post a Comment