"ಕಿರು ವಿಮಾನ ನಿಲ್ದಾಣ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಪ್ರಕಟ..!"

"ಕಿರು ವಿಮಾನ ನಿಲ್ದಾಣ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಪ್ರಕಟ..!"
ಚಿಕ್ಕಮಗಳೂರು: ಕಾಫಿನಾಡಿನ ಬಹುದಿನಗಳ ಕನಸಾದ ಏರ್-ಸ್ಟ್ರಿಪ್ (ಕಿರು ವಿಮಾನ ನಿಲ್ದಾಣ) ಯೋಜನೆಗೆ ಪೂರಕವಾಗಿ ಭೂಸ್ವಾಧೀನ ಪ್ರಕ್ರಿಯೆಯು ಈಗ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ. ಚಿಕ್ಕಮಗಳೂರು ಮತ್ತು ಹಿರೇಮಗಳೂರು ವ್ಯಾಪ್ತಿಯಲ್ಲಿ ಜಮೀನು ಗುರುತಿಸಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಈ ಬಗ್ಗೆ ರಾಜ್ಯ ಪತ್ರದಲ್ಲಿ ಸಾರ್ವಜನಿಕ ಪ್ರಕಟಣೆಯೂ ಹೊರಬಿದ್ದಿದೆ.

ಭೂಸ್ವಾಧೀನ ಕಾಯ್ದೆ 2013ರ ಕಲಂ 11(1)ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಯೋಜನೆಯ ಒಟ್ಟು ಅನುಷ್ಠಾನಕ್ಕಾಗಿ 31 ಎಕರೆಗೂ ಅಧಿಕ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಸದ್ಯ 16.31 ಎಕರೆ ಬಾಕಿ ಜಮೀನನ್ನು ಪ್ರಕ್ರಿಯೆಗೆ ಒಳಪಡಿಸಲು ನಿರ್ಧರಿಸಲಾಗಿದ್ದು, ಸಂತ್ರಸ್ತರಿಗೆ ಪಾರದರ್ಶಕವಾಗಿ ಸೂಕ್ತ ಪರಿಹಾರ ಮತ್ತು ಪುನರ್‌ ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆಗೆ ಚಿಕ್ಕಮಗಳೂರು ಮತ್ತು ಹಿರೇಮಗಳೂರು ನಡುವೆ ಒಟ್ಟು 137 ಎಕರೆ ಜಮೀನನ್ನು ಈಗಾಗಲೇ ಗುರುತಿಸಲಾಗಿದೆ. ಈ ಪೈಕಿ 120 ಎಕರೆ ಸರ್ಕಾರಿ ಜಮೀನಾಗಿದ್ದು, ಉಳಿದ 16.31 ಎಕರೆ ಖಾಸಗಿ ಜಮೀನಿನ ಸ್ವಾಧೀನ ಪ್ರಕ್ರಿಯೆ ಬಾಕಿ ಉಳಿದಿದೆ. ಆದರೆ, ಈ ಪ್ರದೇಶದಲ್ಲಿ ಜಮೀನು ಹೊಂದಿರುವ ಕೃಷಿಕರು ಭೂಮಿ ಬಿಟ್ಟುಕೊಡಲು ನಿರಾಸಕ್ತಿ ತೋರುತ್ತಿರುವುದು ಯೋಜನೆಯ ಮುಂದಿನ ಹಂತಕ್ಕೆ ಸವಾಲಾಗಿದೆ.

ಈ ಹಿನ್ನೆಲೆಯಲ್ಲಿ ರೈತರ ಮನವೊಲಿಸಲು ಹಾಗೂ ಭೂಸ್ವಾಧೀನದ ಬಗ್ಗೆ ಚರ್ಚಿಸಲು ಜನವರಿ 5ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹತ್ವದ ಸಭೆಯನ್ನು ಕರೆಯಲಾಗಿದೆ. 2023-24ರ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಈ ಯೋಜನೆಯು ಪ್ರವಾಸೋದ್ಯಮ ಮತ್ತು ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಮಟ್ಟದ ಬಲ ನೀಡುವ ನಿರೀಕ್ಷೆಯಿದೆ.

ಸುಮಾರು 20 ಆಸನಗಳ ಸಾಮರ್ಥ್ಯದ ವಿಮಾನಗಳು ಇಳಿಯಲು ಕನಿಷ್ಠ 1,200 ಮೀಟರ್ ಉದ್ದ ಮತ್ತು 150 ಮೀಟ‌ರ್ ಅಗಲದ ರನ್ ವೇ ಅಗತ್ಯವಿದ್ದು, ಒಟ್ಟಾರೆ 140 ಎಕರೆ ಜಾಗದ ಅವಶ್ಯಕತೆಯಿದೆ. ಈ ಕಿರು ವಿಮಾನ ನಿಲ್ದಾಣದ ಜೊತೆಗೆ ಹೆಲಿಪೋರ್ಟ್ ನಿರ್ಮಿಸುವ ಪ್ರಸ್ತಾಪವೂ ಸರ್ಕಾರದ ಮುಂದಿದೆ. ಇಲ್ಲಿ ಹೆಲಿಕಾಪ್ಟರ್‌ಗಳು ಇಳಿಯಲು ಮೂರು ಹೆಲಿಪ್ಯಾಡ್‌ಗಳು ನಿರ್ಮಾಣವಾಗಲಿದ್ದು, ಇದರಿಂದ ಜಿಲ್ಲೆಗೆ ಏ‌ರ್ ಆಂಬುಲೆನ್ಸ್‌ ಸೌಲಭ್ಯವೂ ದೊರೆಯಲಿದೆ. ಎಲ್ಲಾ ಪ್ರಕ್ರಿಯೆಗಳು ಶೀಘ್ರವಾಗಿ ಪೂರ್ಣಗೊಂಡು ಕಾಫಿನಾಡಿನ ನೆಲದಲ್ಲಿ ವಿಮಾನ ಇಳಿಯುವಂತಾದರೆ, ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವು ಮತ್ತಷ್ಟು ಎತ್ತರಕ್ಕೆ ಏರುವುದರಲ್ಲಿ ಸಂಶಯವಿಲ್ಲ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "